ಕನ್ನಂಬಾಡಿ : ಈಗ ಕೃಷ್ಣರಾಜಸಾಗರವೆಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಸ್ಥಳ. ಪ್ರಾಚೀನ ಕಾಲದಿಂದಲೂ ಇದು ಸಾಕಷ್ಟು ಪ್ರಾಶಸ್ತ್ಯ ಪಡೆದಿತ್ತು. ಸ್ಥಳ ಪುರಾಣಗಳ ಪ್ರಕಾರ, ಕಣ್ವಮುನಿ ಇಲ್ಲಿ ವಾಸವಾಗಿದ್ದು ಕಣ್ವೇಶ್ವರ ಲಿಂಗವನ್ನು ಇಲ್ಲಿ ಸ್ಥಾಪಿಸಿದ್ದರಿಂದ ಇದಕ್ಕೆ ಕಣ್ವಪುರಿ ಎಂಬ ಹೆಸರೂ ಬಂದಿದೆ. ಹೆಚ್ಚು ಕಡಿಮೆ ರಾಷ್ಟ್ರಕೂಟ ಕಾಲದಿಂದ ಈ ಊರಿನ ಬಗೆಗೆ ಮಾಹಿತಿಗಳು ದೊರೆಯುತ್ತವೆ. ಇಲ್ಲಿ ಕಣ್ವೇಶ್ವರ, ಗೋಪಾಲಕೃಷ್ಣ ಮತ್ತು ಲಕ್ಷ್ಮೀದೇವಿ ದೇವಾಲಯಗಳಿವೆ. ಇವುಗಳಲ್ಲಿ ಕಣ್ವೇಶ್ವರ ದೇವಾಲಯ ಬಹು ಪ್ರಾಚೀನವಾದುದು. ಇದು ಪ್ರ.ಶ. ಸು. 812ರಲ್ಲಿ ರಾಷ್ಟ್ರಕೂಟ ಮೊದಲನೆಯ ಕೃಷ್ಣನಿಂದ ನಿರ್ಮಿತವಾಗಿದ್ದಿರಬಹುದು, ಗರ್ಭಗೃಹ, ನವರಂಗ, ಸುಕನಾಸಿಗಳುಳ್ಳ ಈ ದೇವಾಲಯದಲ್ಲಿ ಗಣಪತಿ, ಉಮಾಮಹೇಶ್ವರ, ಮಹಿಷಾಸುರಮರ್ದಿನಿ, ಕುಮಾರ ಮೊದಲಾದ ದೇವತೆಗಳ ಶಿಲ್ಪಗಳಿವೆ. ವಿವಿಧ ಕಾಲಗಳಿಗೆ ಸೇರಿದ ನಾಲ್ಕು ಶಾಸನಗಳೂ ಇವೆ. ಗೋಪಾಲ ಕೃಷ್ಣ ದೇವಾಲಯ ದ್ರಾವಿಡ ಮತ್ತು ಚಾಳುಕ್ಯ ವಾಸ್ತುಶೈಲಿಗಳ ಮಿಶ್ರ ಕಟ್ಟಡ. ವಾಸ್ತುಶಿಲ್ಪ ದೃಷ್ಟಿಯಿಂದ ಇದೊಂದು ಸುಂದರ ದೇವಾಲಯ. ವಿಷ್ಣುವಿನ ದಶಾವತಾರಗಳು, ಬ್ರಹ್ಮ, ಸರಸ್ವತಿ, ಹರಿಹರ, ಹಯಗ್ರೀವ ಮುಂತಾದ ದೇವತೆಗಳ ಶಿಲ್ಪಗಳು ನಯನಮನೋಹರ ವಾಗಿವೆ. ಕೆಲವು ವಿಗ್ರಹಗಳ ಮೇಲ್ಭಾಗದಲ್ಲಿ, ಹೊಯ್ಸಳ ಕಾಲದ ಕನ್ನಡ ಲಿಪಿಯಲ್ಲಿ ಬರೆಯಲಾದ ದೇವತೆಗಳ ಹೆಸರುಗಳಿವೆ. ಗರ್ಭಗೃಹ, ಸುಕನಾಸಿ, ನವರಂಗ, ಮತ್ತು ಮುಖಮಂಡಪವನ್ನುಳ್ಳ ಈ ದೇವಾಲಯದ ಆರು ಅಡಿ ಎತ್ತರದ ಗೋಪಾಲಕೃಷ್ಣ ಮೂರ್ತಿ ಬಹು ಮುದ್ದಾಗಿದೆ. ಇಲ್ಲಿನ ಶಾಸನವೊಂದು ಹೊಯ್ಸಳ ಮೂರನೆಯ ಬಲ್ಲಾಳನ ಕಾಲಕ್ಕೆ ಸೇರಿದ್ದುದರಿಂದ, ಈ ದೇವಾಲಯ ಪ್ರ.ಶ. 1300ಕ್ಕಿಂತಲೂ ಮುಂಚೆಯೇ ನಿರ್ಮಾಣವಾಗಿರಬೇಕೆಂದು ಗೊತ್ತಾಗುತ್ತದೆ. ಪ್ರ.ಶ. 1606ರಲ್ಲಿ ಈ ಸ್ಥಳವನ್ನು ದೊಡ್ಡಯ್ಯ ಪ್ರಭು ಎಂಬುವನಿಂದ ರಾಜ ಒಡೆಯರು ಗೆದ್ದುಕೊಂಡರು. ಅವರ ಮಗನಾದ ನರಸರಾಜ ಒಡೆಯರು ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿದರು. ಇಲ್ಲಿರುವ ಮೂರನೆಯ ದೇವಾಲಯ ಲಕ್ಷ್ಮೀದೇವಿ ದೇಗುಲ. ಇದು ಇತ್ತೀಚಿನದಾಗಿದ್ದು ಪ್ರ.ಶ.1818ರಲ್ಲಿ ನಿರ್ಮಿತವಾಯಿತು. ಉಜ್ಜಯಿನಿಯ ಮಹಾಕಾಳಿ ದೇವಾಲಯದ ಮಾದರಿಯಲ್ಲಿ ಈ ದೇವಾಲಯ ನಿರ್ಮಿತವಾಯಿತು ಎಂದು ಶಾಸನವೊಂದು ತಿಳಿಸುತ್ತದೆ. ಈ ಮೂರು ದೇವಾಲಯಗಳೂ ಈಗ ಕಾವೇರಿಯ ನೀರಿನಲ್ಲಿ ಮುಳುಗಿ ಹೋಗಿವೆ.

ಇಲ್ಲಿರುವ ಪಾರಸಿ ಭಾಷೆಯ ಶಾಸನವೊಂದರಿಂದ. ಪ್ರ.ಶ. 1794ರಲ್ಲಿ ಟಿಪ್ಪುಸುಲ್ತಾನ ಕಾವೇರಿ ನದಿಗೆ 22 ಮೀ ಎತ್ತರದ ಕಟ್ಟೆಯನ್ನು ಇಲ್ಲಿ ನಿರ್ಮಿಸಿದನೆಂದು ತಿಳಿಯುತ್ತದೆ. ಈಗಿನ ಕೃಷ್ಣರಾಜಸಾಗರ ಕಟ್ಟೆ, ಟಿಪ್ಪುಸುಲ್ತಾನ ನಿರ್ಮಿಸಿದ್ದ ಕಟ್ಟೆಯ ಸ್ಥಳದಲ್ಲಿಯೇ ಇರುವುದು ಗಮನಿಸಬೇಕಾದ ಅಂಶ (ನೋಡಿ- ಕೃಷ್ಣರಾಜಸಾಗರ).	(ಎ.ಪಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ